ಪ್ರಿಯತಮೆಗೆ ಚಾಕು ಇರಿದು ಕೊಂದು ಬಳಿಕ ಪಾಗಲ್ ಪ್ರೇಮಿ ಆತ್ಮಹತ್ಯೆ
Join WhatsApp | Join Telegram | Live |

Yuva Vahini - News Desk.
ಬೆಳಗಾವಿ: ಪಾಗಲ್ ಪ್ರೇಮಿಯೊಬ್ಬ ತಾನು ಪ್ರೀತಿಸುತ್ತಿದ್ದ ವಿವಾಹಿತ ಮಹಿಳೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಬಳಿಕ ಅದೇ ಚಾಕುವಿನಿಂದ ತಾನೂ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಬೀಡಿ ಗ್ರಾಮದ ನಿವಾಸಿ ರೇಷ್ಮಾ ತಿರವೀರ (28) ಕೊಲೆಯಾದ ದುರ್ದೈವಿ. ಆನಂದ ರಾಜು ಸುತಾರ(30) ಕೊಲೆ ಮಾಡಿದ ಬಳಿಕ ತಾನು ಕೂಡಾ ಚಾಕುವಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕೊಲೆಗೆ ಅನೈತಿಕ ಸಂಬಂಧ ಕಾರಣ ಎಂದು ಶಂಕಿಸಲಾಗಿದೆ.
ಕೊಲೆಯಾದ ಮಹಿಳೆಗೆ ಮದುವೆಯಾಗಿದ್ದು, ಎರಡು ಮಕ್ಕಳಿದ್ದಾರೆ. ಆನಂದನಿಗೂ ಮದುವೆ ಆಗಿ ಮೂರು ಮಕ್ಕಳಿದ್ದಾರೆ. ಆನಂದ ಮತ್ತು ಮಹಿಳೆ ವಿವಾಹೇತರ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ಇಬ್ಬರು ಪರಸ್ಪರ ಪ್ರೀತಿಸುತ್ತಿರುವ ವಿಷಯ ಮಹಿಳೆಯ ಗಂಡನಿಗೆ ತಿಳಿದಿತ್ತು. ಇದರಿಂದ ಮನೆಯಲ್ಲಿ ಸಣ್ಣಪುಟ್ಟ ಗಲಾಟೆಗಳು ಶುರುವಾಗಿದ್ದವು. ಅಲ್ಲದೇ ಮಹಿಳೆಯ ಪತಿ ನಂದಗಡ ಪೊಲೀಸ್ ಠಾಣೆಯಲ್ಲಿ ಆನಂದ ವಿರುದ್ಧ ದೂರು ನೀಡಿದ್ದರು. ಪೊಲೀಸರು ಆನಂದನನ್ನು ಠಾಣೆಗೆ ಕರೆಸಿ ಇನ್ಮುಂದೆ ಮಹಿಳೆಯ ಸಹವಾಸಕ್ಕೆ ಹೋಗದಂತೆ ಮತ್ತು ಅನೈತಿಕ ಸಂಬಂಧ ಮುಂದುವರಿಸದಂತೆ ಇಬ್ಬರಿಗೂ ಬುದ್ಧಿವಾದ ಹೇಳಿ ಕಳುಹಿಸಿದ್ದರು.
ಇದರಿಂದ ಕುಪಿತನಾಗಿದ್ದ ಆನಂದ ಸುತಾರ ಗುರುವಾರ ರಾತ್ರಿ ಮಹಿಳೆಯ ಗಂಡ ಹಾಲು ಹಾಕಲು ಡೈರಿಗೆ ಹೋದ ಸಮಯದಲ್ಲಿ ಹಿಂಬಾಗಿಲಿನಿಂದ ಮನೆಗೆ ನುಗ್ಗಿದ್ದ. ಬಳಿಕ ಮಹಿಳೆಯ ಎದೆ, ಹೊಟ್ಟೆ, ಬೆನ್ನು ಸೇರಿ ಸಿಕ್ಕಸಿಕ್ಕಲ್ಲಿ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮಹಿಳೆ ಮೃತಪಟ್ಟಿದ್ದಾರೆ. ಬಳಿಕ ಅದೇ ಚಾಕುವಿನಿಂದ ತಾನೂ ಚುಚ್ಚಿಕೊಂಡಿದ್ದಾನೆ. ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಆನಂದ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Join WhatsApp | Join Facebook | Live | Join Telegram |